ಸಂಶೋಧಕರು
ಭೂಸನೂರುಮಠ ಎಸ್.ಎಸ್., 1910-1991

ತನ್ನ ಅನೇಕ ಸಮಕಾಲೀನರಂತೆ, ಸಂಗಯ್ಯ ಶಿವಮೂರ್ತಯ್ಯ ಭೂಸನೂರುಮಠ ಅವರೂ ಸೃಜನಶೀಲತೆ, ವಿದ್ವತ್ತು ಮತ್ತು ವಿಮರ್ಶಕ ಪ್ರತಿಭೆಗಳ ಸಂಯೋಜನೆಯಾಗಿದ್ದರು. ಈ ಬಹುಮುಖೀ ಪ್ರತಿಭೆಯು ಅವರ ಬರವಣಿಗೆಯಲ್ಲಿ, ಅದರಲ್ಲಿಯೂ ವಚನಗಳನ್ನು ಕುರಿತ ಪುಸ್ತಕಗಳಲ್ಲಿ ಪ್ರತಿಫಲಿಸಿದೆ. ಭೂಸನೂರುಮಠರು, ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಚಿಕ್ಕ ಹಳ್ಳಿಯಾದ ನಿಡಗುಂದಿಯಲ್ಲಿ ಹುಟ್ಟಿದರು. ಗದಗ ಮತ್ತು ಹುಬ್ಬಳ್ಳಿಗಳಲ್ಲಿ ಮೊದಲ ಹಂತದ ಶಿಕ್ಷಣವನ್ನು ಪಡೆದ ನಂತರ, ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ. (19350 ಮತ್ತು ಎಂ.ಎ.(1937) ಪದವಿಗಳನ್ನು ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ, ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, (1939) ಅನಂತರ ಬೆಳಗಾವಿಯ ಲಿಂಗರಾಜ ಕಾಲೇಜಿಗೆ ತೆರಳಿದರು.(1943-66) ಕೊನೆಗೆ, ಕರ್ನಾಟಕಕ್ಕೆ ಹಿಂದಿರುಗಿ, ಕರ್ನಾಟಕ ವಶ್ವವಿದ್ಯಾಲಯದ, ವೀರಶೈವ ಸಾಹಿತ್ಯ ಮತ್ತು ಧರ್ಮವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಅಲ್ಲಿಯೇ ಸೇವೆಯಿಂದ ನಿವೃತ್ತರಾದರು.(1966-71)

ಭೂಸನೂರುಮಠರು, ವಚನಸಾಹಿತ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಹಲವು ಬಗೆಗಳಲ್ಲಿ ಮಾಡಿದ್ದಾರೆ. ಅವರು ಸಂಪಾದನೆ ಮಾಡಿದ, ಆ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ:

1

ಭಕ್ತಿಸುಧಾಸಾರ

ಘನಮಠದ ಶಿವಯೋಗಿ

1945

2

ಗುರುರಾಜ ಚಾರಿತ್ರ

ಸಿದ್ಧನಂಜೇಶ

1950

3

ಮೋಳಿಗೆ ಮಾರಯ್ಯನ ವಚನಗಳು

1950

4

ರಾಣಿ ಮಹಾದೇವಿಯಮ್ಮನ ವಚನಗಳು

1950

5

ಮೋಳಿಗೆಯ್ಯನ ಪುರಾಣ

ಗೌರಾಂಕ

1951

6

ಪ್ರೌಢರಾಯನ ಕಾವ್ಯ

ಅದೃಶ್ಯ ಕವಿ

1957

7

ಶೂನ್ಯಸಂಪಾದನೆ

ಗೂಳೂರು ಸಿದ್ದವೀರಣ್ಣೊಡೆಯ

1958

8

ಏಕೋತ್ತರಶತಸ್ಥಲ

ಮಹಾಲಿಂಗದೇವರು

1974

 

ಇವಲ್ಲದೆ, ಅವರು ಕರ್ನಾಟಕ ಸರ್ಕಾರಕ್ಕಾಗಿ ವಚನಗಳ ಸಂಕಲನವೊಂದನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಅದಕ್ಕೆ ಬರೆದಿರುವ ಪ್ರವೇಶಿಕೆಯು ಬಹಳ ಉಪಯುಕ್ತವೂ ಆತ್ಮೀಯವೂ ಆಗಿದೆ. ಅವರೇ ಸಂಪಾದಿಸಿದ ಕಲ್ಲುಮಠದ ಪ್ರಭುದೇವರ ಲಿಂಗಲೀಲಾವಿಲಾಸ ಕೃತಿಯನ್ನೂ ಇಲ್ಲಿಯೇ ಹೆಸರಿಬಹುದು.

ಭೂಸನೂರುಮಠರು ಕನ್ನಡದ ಪ್ರಮುಖ ತಾತ್ವಿಕ-ಸಾಹಿತ್ಯಕ ಕೃತಿಗಳಲ್ಲಿ ಒಂದಾದ ಶೂನ್ಯಸಂಪಾದನೆಯನ್ನು ಇಂಗ್ಲಿಷ್ ಲಿಪ್ಯಂತರ ಮತ್ತು ಭಾಷಾಂತರಗಳೊಂದಿಗೆ ಸಂಪಾದಿಸಿದರು. ಐದು ಸಂಪುಟಗಳ ಈ ಕೃತಿಸರಣಿಯ ನಾಲ್ಕು ಸಂಪುಟಗಳನ್ನು, ಅವರು ಸಿದ್ಧಪಡೆಇಸಿದರು.. ಐದನೆಯ ಸಂಪುಟವು ಹೊರಬರುವ ವೇಳೆಗೆ, ಅವರು ನಿವೃತ್ತರಾಗಿದ್ದರು. ಈ ಸಂಪುಟಗಳನ್ನು ಕರ್ನಾಟಕ ವಿಶ್ವವಿದ್ಯಾಲಯವು ಹೊರತಂದಿದೆ. ಈ ಸರಣಿಯು ಮೌಲಿಕವಾದ ಪ್ರವೇಶಿಕೆ ಮತ್ತು ಅನೇಕ ಉಪಯುಕ್ತವಾದ ಅನುಬಂಧಗಳನ್ನು ಒಳಗೊಂಡಿದೆ.

ಶೂನ್ಯಸಂಪಾದನೆಯ ಪರಾಮರ್ಶೆಯು ಭೂಸನೂರುಮಠರ ಅತ್ಯುತ್ತಮ ಕೃತಿ. ಈ ಪುಸ್ತಕಕ್ಕೆ, 1971 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂತು. ಅವರ ಹಲವು ಕೌಶಲ್ಯಗಳು ಇಲ್ಲಿ ಒಗ್ಗೂಡಿವೆ. ಇದು ವೀರಶೈವ ತತ್ವಶಾಸ್ತ್ರ, ಧರ್ಮ ಮತ್ತು ಆಚರಣಾಸಂಹಿತೆಗಳನ್ನು(ಥಿಯಾಲಜಿ) ಒಟ್ಟಂದದಲ್ಲಿ ಪರಿಶೀಲಿಸುತ್ತದೆ. ಆ ಸಂಗತಿಗಳು ವಚನಗಳಲ್ಲಿ ಒಟ್ಟುಗೂಡಿ ಅತ್ಯುತ್ತಮವಾದ ಸಾಹಿತ್ಯದ ಹುಟ್ಟಿಗೆ ಕಾರಣವಾಗಿರುವ ಬಗೆಯನ್ನೂ ಅವರು ನಿರೂಪಿಸಿದ್ದಾರೆ. ಅವರು ಈ ವಸ್ತುವನ್ನು ಪಾಶ್ಚಾತ್ಯ ತತ್ವಶಾಸ್ತ್ರ ಹಾಗೂ ವೈಜ್ಞಾನಿಕ ತಿಳಿವಳಿಕೆಯ ಬೆಳಕಿನಲ್ಲಿಯೂ ನೋಡಿದ್ದಾರೆ. ಈ ಎಲ್ಲ ವಿಷಯಗಳನ್ನು, ಭಾವಗೀತೆಯಂತಹ ಆದರೂ ಪಾರದರ್ಶಕವಾದ ಭಾಷೆಯಲ್ಲಿ ಕಟ್ಟಿಕೊಡಲು ಅವರಿಗೆ ಸಾಧ್ಯವಾಗಿದೆ. ಇಂತಹ ಬರವಣಿಗೆಯಲ್ಲಿ ಇದು ಅಪರೂಪದ ಗುಣ. ಇಲ್ಲಿನ ಗದ್ಯಶೈಲಿಯು ಬಹಳ ಆತ್ಮೀಯವಾದರೂ ವಿಶ್ಲೇಣಾತ್ಮಕವಾಗಿದೆ. ಲೇಖಕರು, ಓದುಗನನ್ನು ತನ್ನ ಸಹಪಯಣಿಗನೆಂದು ಭಾವಿಸಿ, ಆತ್ಮಶೋಧನೆಯ ಹಾದಿಯಲ್ಲಿ ಮುಂದುವರಿಯುತ್ತಾರೆ. ಈ ಪುಸ್ತಕವು ಪರಿಶೀಲಿಸುವ ವಚನಸಾಹಿತ್ಯ ಮತ್ತು ವೀರಶೈವಧರ್ಮಗಳು ಭಾರತೀಯ ಸಂಸ್ಕೃತಿಗೆ ಕರ್ನಾಟಕವು ನೀಡಿರುವ ಶ್ರೇಷ್ಠ ಕೊಡುಗೆಯಾಗಿರುವುದರಿಂದಲೂ, ಇದಕ್ಕೆ ಮಹತ್ವವು ಒದಗಿಬಂದಿದೆ.

ತನ್ನ ಜೀವನದ ಕೊನೆಯ ಕೆಲ ವರ್ಷಗಳಲ್ಲಿ, ಭೂಸನೂರುಮಠರು ಭವ್ಯಮಾನವ ಎಂಬ ಮಹಾಕಾವ್ಯವನ್ನು ರಚಿಸಿದರು. ಹನ್ನೆರಡನೆಯ ಶತಮಾನದ ಮಹಾನ್ ಸಂತಳೂ ಕವಯತ್ರಿಯೂ ಆದ ಅಕ್ಕಮಹಾದೇವಿಯು ಈ ಕಾವ್ಯದ ಕೇಂದ್ರಪಾತ್ರ. ಕಲ್ಯಾಣದಿಂದ ಕಾಶ್ಮೀರಕ್ಕೆ ಎನ್ನುವುದು ಅವರ ಇನ್ನೊಂದು ಕೃತಿ.

ಭೂಸನೂರುಮಠರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಲ್ಲದೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ ಶೂನ್ಯಸಂಪಾದನೆಯ ಪರಾಮರ್ಶೆಗೆ, ಮರಣೋತ್ತರವಾಗಿ ಪಂಪಪ್ರಶಸ್ತಿಯನ್ನು ಕೊಡಲಾಯಿತು.

ಮುಖಪುಟ / ಸಂಶೋಧಕರು